ರಾವಣ 	
ಪ್ರಾಚೀನ ಲಂಕೆಯ ರಾಜ, ವಾಲ್ಮೀಕಿ ರಾಮಾಯಣದ ಒಂದು ಪ್ರಮುಖ ಖಳನಾಯಕ ಪಾತ್ರ. ಪುರಾಣದ ಪ್ರಕಾರ ವೈವಸ್ವತ ಮನ್ವಂತರದಲ್ಲಿ ಬ್ರಹ್ಮಮಾನಸ ಪುತ್ರನಾದ ಪೌಲಸ್ತ್ಯ ಮುನಿಯ ಮೊಮ್ಮಗನಾದ ವಿಶ್ರವಸ್. ಮತ್ತು ಪಾತಾಳಲೋಕದ ನಿವಾಸಿ ರಾಕ್ಷಸ ಸುಮಾಲಿಯ ಪುತ್ರಿ ಕೈಕಸಿ ದಂಪತಿಗಳ ಹಿರಿಯ ಮಗ. ಕುಂಭಕರ್ಣ ಮತ್ತು ವಿಭೀಷಣ ಇವನ ತಮ್ಮಂದಿರು. ತಂಗಿ ಶೂರ್ಪನಖಿ. ಸನಕಾದಿಮುನಿಗಳು ವಿಷ್ಣುದರ್ಶನಾರ್ಥಿಗಳಾಗಿ ವೈಕುಂಠಕ್ಕೆ ಹೋದಾಗ ಏಕಾಂತದಲ್ಲಿದ್ದ ವಿಷ್ಣುವಿನ ದರ್ಶನಕ್ಕೆ ಮುನಿಗಳನ್ನು ಬಿಡದೆ ತಡೆದ ದ್ವಾರಪಾಲಕರಾದ ಜಯ-ವಿಜಯರನ್ನು ಮುನಿಗಳು ಭೂಲೋಕದಲ್ಲಿ ರಾಕ್ಷಸರಾಗಿ ಮೂರು ಜನ್ಮತಾಳುವಂತೆ ಶಪಿಸಿದರು. ತನ್ನ ಈ ಶಾಪಗ್ರಸ್ತ ಎರಡನೆಯ ಜನ್ಮದಲ್ಲಿ ಜಯ ರಾವಣನಾಗಿ ಹುಟ್ಟಿದ.

ತನ್ನ ತಂದೆಯ ಅಭೀಷ್ಟದಂತೆ ಪೌಲಸ್ತ್ಯ ಮುನಿಯಿಂದ ಪುತ್ರಪ್ರಾಪ್ತಿ ಪಡೆಯಲು ಅವನ ಆಶ್ರಮಕ್ಕೆ ಕೈಕಸಿ ಬಂದಾಗ ಅಗ್ನಿಹೋತ್ರ ಕಾರ್ಯದಲ್ಲಿ ಮಗ್ನನಾಗಿದ್ದ ವಿಶ್ವವಸ್ ಯe್ಞÁನಂತರ ಅವಳು ಬಂದ ಕಾರಣವನ್ನು ತಿಳಿಯಬಯಸಿದ. ತಪೋಬಲದಿಂದ ನೀನೆ ಅದನ್ನು ತಿಳಿದಿಕೊ ಎಂದು ಕೈಕಸಿ ಹೇಳಿದಳು. ಅವಳ ಉದ್ದೇಶವನ್ನು ತಿಳಿದ ವಿಶ್ರವಸ್ ಪುತ್ರಪ್ರಾಪ್ತಿಯನ್ನು ಬೇಡಿ ದಾರುಣ ವೇಳೆಯಲ್ಲಿ ಬಂದಿರುವುದರಿಂದ ದಾರುಣ ಸ್ವಭಾವದ ಪುತ್ರ ಹುಟ್ಟುವನೆಂದು ಹೇಳಿದ. ಹಾಗಾಗಿ ಆಕೆಗೆ ಹತ್ತು ತಲೆ, ಇಪ್ಪತ್ತು ಕೈಗಳನ್ನು ಹೊಂದಿದ್ದ ವಿಕಾರ ರೂಪದ ಪುತ್ರನ ಜನನವಾಯಿತು. ಮಗುವಿಗೆ ದಶಗ್ರೀವ ಎಂದು ಹೆಸರಿಡಲಾಯಿತು. 

ತಾಯಿಯ ಪ್ರೇರಣೆಯಂತೆ ರಾವಣ ಗೋಕರ್ಣ ಕ್ಷೇತ್ರದಲ್ಲಿ ಹತ್ತು ಸಾವಿರ ವರ್ಷ ಕಾಲ ಆಚರಿಸಿದ ಕಠಿಣ ತಪಸ್ಸಿನಿಂದ ಪ್ರೀತನಾದ ಶಿವ ರಾವಣನ ಇಚ್ಚೆಯಂತೆ ಮನುಷ್ಯರನ್ನುಳಿದು ಮತ್ತಾರಿಂದಲೂ ಅವನಿಗೆ ಸಾವಿಲ್ಲದಂತೆ ವರ ನೀಡಿದ. ವಿಷ್ಣುವಿನ ಭಯದಿಂದ ಪಾತಾಳದಲ್ಲಿ ಅಡಗಿಕೊಂಡಿದ್ದ ಸುಮಾಲಿ ಎಂಬ ರಾಕ್ಷಸ ತನ್ನ ಮಂತ್ರಿಗಾಳಾದ ಪ್ರಹಸ್ತ, ಮಾರೀಚ, ವಿರೂಪಾಕ್ಷ ಮತ್ತು ಮಹೋದದರೊಡನೆ ರಾವಣನ ಆಶ್ರಯಕ್ಕೆ ಬಂದ. ಮೊದಲಿನಿಂದಲೂ ರಾಕ್ಷಸರ ಆವಾಸಸ್ಥಾನವಾಗಿದ್ದ ಲಂಕೆ ಪ್ರಕೃತ ತನ್ನ ಮಲಸಹೋದರನಾದ ಕುಬೇರನ ವಶದಲ್ಲಿದ್ದುದನ್ನು ತನ್ನ ವಶಕ್ಕೆ ತೆಗೆದುಕೊಳ್ಳಬೇಕೆಂದು ಸುಮಾಲಿಯಿಂದ ಪ್ರೇರಿತನಾದ ರಾವಣ ಆ ಕಾರ್ಯ ಸಾಧನೆಗಾಗಿ ಪ್ರಹಸ್ತನನ್ನು ಕುಬೇರನ ಬಳಿಗೆ ಕಳುಹಿಸಿದ. ದುಷ್ಟನಾದ ರಾವಣನ ಸಹವಾಸ ಬೇಡವೆಂಬ ತಂದೆಯ ಅಭಿಪ್ರಾಯದಂತೆ ಕುಬೇರ ಲಂಕೆಯನ್ನು ಬಿಟ್ಟುಕೊಟ್ಟು ತಾನು ಕೈಲಾಸದಲ್ಲಿ ವಾಸಮಾಡಲು ಹೊರಟುಹೋದ. ರಾವಣ ಲಂಕೇಶ್ವರನಾಗಿ ಅಭಿಷಿಕ್ತನಾದ ಅಲ್ಲೇ ನೆಲಸಿದ. ತಂಗಿ ಶೂರ್ಪನಖಿಯನ್ನು ವಿದ್ಯುಜಿಹ್ವನಿಗೆ ಮದುವೆ ಮಾಡಿದ. ಯನ ಮಗಳಾದ ಮಂಡೋದರಿಯನ್ನು ರಾವಣ ವಿವಾಹವಾದ. ಅನಂತರ ವೈರೋಚನಿಯ ಮೊಮ್ಮಗಳು ವಜ್ರಜ್ವಾಲೆಯನ್ನು ಕುಂಭಕರ್ಣನಿಗೂ ಗಂಧರ್ವ ರಾಜಪುತ್ರಿ ಸರಮಾಳನ್ನು ವಿಭೀಷಣನಿಗೂ ವಿವಾಹ ಮಾಡಿಸಿದ. ರಾವಣನಿಗೆ ಮೇಘನಾದ (ಇಂದ್ರಜಿತ್) ಎಂಬ ಪುತ್ರ ಹುಟ್ಟಿದ.

ಶಿವನ ವರಬಲದಿಂದ ಪ್ರಬಲನಾದ ದಶಗ್ರೀವ ದಿಗ್ವಿಜಯಕ್ಕೆ ಹೊರಟು ಮೊದಲಿಗೆ ತನ್ನಣ್ಣ ಕುಬೇರನನ್ನು ಸೋಲಿಸಿ ಅವನ ಬಳಿಯಿದ್ದ ಪುಷ್ಪಕ ವಿಮಾನವನ್ನು ವಶಪಡಿಸಿಕೊಂಡ. ಒಮ್ಮೆ ತ್ರಿಲೋಕ ಸಂಚಾರ ಕೈಗೊಂಡು ಪುಷ್ಪಕ ವಿಮಾನದಲ್ಲಿ ಹೋಗುತ್ತಿದ್ದಾಗ ದಾರಿಗಡ್ಡಲಾದ ಕೈಲಾಸಪರ್ವತದಲ್ಲಿದ್ದ ನಂದಿಯನ್ನು ನೋಡಿ ಅವನನ್ನು ಕಪಿಮುಖದವನೆಂದು ಪರಿಹಾಸ ಮಾಡಿದ. ಕುಪಿತನಾದ ನಂದಿ ಕಪಿಗಳಿಂದಲೇ ನಿನ್ನ ವಿನಾಶವಾಗಲೆಂದು ಶಪಿಸಿದ. ತನ್ನ ದಾರಿ ಗಡ್ಡಲಾದ ಕೈಲಾಸವನ್ನು ಕಿತ್ತೆಸೆಯಲು ತೊಡಗಿದಾಗ ಪರ್ವತ ಅಲುಗಾಡಿತು. ಶಿವ ತನ್ನ ಉಂಗುಷ್ಠದಿಂದ ಪರ್ವತವನ್ನು ಒತ್ತಿ ಹಿಡಿದಾಗ ರಾವಣನ ಕೈಗಳು ಅದರಡಿಯಲ್ಲಿ ಸಿಕ್ಕಿಕೊಂಡು ಸಹಿಸಲಸದಳವಾದ ನೋವಿನಿಂದ ಮೂರು ಲೋಕಗಳು ನಡುಗುವಂತೆ ಭಯಂಕರವಾಗಿ ಕಿರುಚಿದ. ಹಾಗಾಗಿ ಇವನಿಗೆ ರಾವಣ ಎಂಬ ಹೆಸರು ಬಂತೆಂದು ಪ್ರತೀತಿ. ಕೈಗಳನ್ನು ಬಿಡಿಸಿಕೊಳ್ಳಲು ದೀರ್ಘ ತಪಸ್ಸಿನಿಂದ ಶಿವನನ್ನು ತೃಪ್ತಿಪಡಿಸಿ ಕೈಗಳನ್ನು ಬಿಡಿಸಿಕೊಂಡುದಲ್ಲದೆ ಚಂದ್ರಹಾಸ ಎಂಬ ದಿವ್ಯ ಖಡ್ಗವನ್ನೂ ದೀರ್ಘಾಯುಷ್ಯವನ್ನೂ ಪಡೆದುಕೊಂಡ.

ಹಿಮವತ್ ಪ್ರಾಂತದಲ್ಲಿ ಸಂಚರಿಸುತ್ತಿದ್ದಾಗ ಕೃಷ್ಣಾಜಿನಧಾರಿಯಾಗಿ ತಪೋನಿರತಳಾದ ಕುಶಿಧ್ವಾಜನ ಪುತ್ರಿ ವೇದವತಿಯನ್ನು ಕಾಮಕ್ರೀಡೆಗೆ ಬಲಾತ್ಕರಿಸಿದಾಗ ಅವಳು ತಾನು ಮುಂದಿನ ಜನ್ಮದಲ್ಲಿ ಅಯೋನಿಜೆಯಾಗಿ ಜನಿಸಿ ರಾವಣ ಮೃತ್ಯುವಾಗುವುದಾಗಿ ಪ್ರತಿಜ್ಞೆಗೈದು ಅಗ್ನಿಪ್ರವೇಶ ಮಾಡಿದಳು. ಆ ಬಳಿಕ ರಾವಣ ಯುದ್ಧಾಕಾಂಕ್ಷಿಯಾಗಿ ಮರುತ್ ರಾಜನ ಯಾಗಶಾಲೆಗೆ ನುಗ್ಗಿದಾಗ ಅಲ್ಲಿದ್ದ ಇಂದ್ರ ನವಿಲು ರೂಪದಿಂದ, ಯಮ ಕಾಗೆಯಾಗಿ, ವರುಣ ಹಂಸವಾಗಿ, ಕುಬೇರ ಅಳಿಲು ವೇಷದಿಂದ ತಪ್ಪಿಸಿಕೊಂಡರು; ಯಜ್ಞಮಧ್ಯದಲ್ಲಿ ಅನ್ಯಕಾರ್ಯಸಕ್ತನಾಗಬಾರದೆಂದು ಸಂವರ್ತ ಮುನಿ ಹೇಳಿದುದರಿಂದ ಮರುತ್ ಮೌನಿಯಾದ. ತಾನೇ ವಿಜಯಿಯೆಂದು ಮನ್ನಡೆದ ರಾವಣ ಹಲವಾರು ರಾಜರನ್ನು ಸೋಲಿಸಿದ. ಕೊನೆಗೆ ಅಯೋಧ್ಯಾಪತಿಯಾದ ಸೂರ್ಯವಂಶದ ಅನರಣ್ಯನನ್ನು ಯುದ್ಧದಲ್ಲಿ ಕೊಂದ. ಸಾಯುವಾಗ ಅನರಣ್ಯ ತನ್ನ ವಂಶಜನಾದ ರಾಮನಿಂದ ರಾವಣನ ನಾಶವಾಗಲೆಂದು ಶಪಿಸಿದ. ದಿಗ್ವಿಜಯ ಮುಗಿಸಿ ಹಿಂತಿರುಗುತ್ತಿದ್ದ ರಾವಣನನ್ನು ಭೇಟಿಯಾದ ನಾರದ ನೀನಿನ್ನೂ ಯಮನನ್ನು ಗೆಲ್ಲಲಿಲ್ಲವೆಂದು ಪ್ರಚೋದಿಸಿದ. ಆಗ ರಾವಣ ಯಮನ ಮೇಲೆ ಮುನ್ನುಗ್ಗಿದ. ಕ್ರೋಧಗ್ರಸ್ತನಾದ ಯಮ ಕಾಲದಂಡದಿಂದ ರಾವಣನನ್ನು ಕೊಲ್ಲಲು ಸಿದ್ಧನಾದಾಗಿ ಬ್ರಹ್ಮ ತನ್ನ ವರ ಸುಳ್ಳಾಗಬಾರದೆಂದೂ ಆದುದರಿಂದ ಕಾಲದಂಡವನ್ನು ಪ್ರಯೋಗಿಸಬಾರದೆಂದೂ ಯಮನಿಗೆ ತಿಳಿಸಿದ. ಆಗ ಯಮ ಅದೃಶ್ಯನಾದ. ರಾವಣ ತಾನೇ ಗೆದ್ದೆನೆಂದು ಭಾವಿಸಿಕೊಂಡ. ಅನಂತರ ಪಾತಾಳಕ್ಕೆ ನುಗ್ಗಿದ ರಾವಣ ಅಲ್ಲಿದ್ದ ಸಿವಾತ ಕವಚರನ್ನು ಎದುರಿಸಿ ಬ್ರಹ್ಮನ ಸಂಧಾನದಿಂದ ಅವರೊಡನೆ ಸಂಧಿಮಾಡಿಕೊಂಡ. ಮುಂದೆ ಆಶ್ಮಾ ನಗರದ ಕಾಲಕೇಯರನ್ನು ಸದೆಬಡಿದು, ತನ್ನ ತಂಗಿ ಶೂರ್ಪಣಖಿಯ ಗಂಡ ವಿದ್ಯಜಿಹ್ವನನ್ನು ಕೊಂದು ಅಲ್ಲಿಂದ ವರುಣ ಲೋಕಕ್ಕೆ ಮುನ್ನುಗ್ಗಿ ಅಲ್ಲಿ ವರುಣನಿಲ್ಲದಿದ್ದುದರಿಂದ ತಾನೇ ಜಯಶಾಲಿಯೆಮದು ಘೋಷಿಸಿಕೊಂಡ. ತದನಂತರ ಬಲಿ ಚಕ್ರವರ್ತಿಯ ಆಸ್ಥಾನಕ್ಕೆ ಬಂದಾಗ ಅಲ್ಲಿ ದ್ವಾರಪಾಲಕನಾದ ಶ್ರೀ ಹರಿ ಅದೃಶ್ಯನಾಗಿರಲೂ ಮತ್ತೆ ತಾನೇ ವಿಜಯಿಯೆಂದು ಭಾವಿಸಿದ. ಚಂದ್ರಲೋಕದ ಹಾದಿಯಲ್ಲಿದ್ದಾಗ ಪರ್ವತಮಹರ್ಷಿಯ ಸಲಹೆಯಂತೆ ಲಂಕೆಗೆ ಹಿಂದಿರುಗಿದ.

ತನ್ನಿಂದಲೇ ವಿಧವೆಯಾದ ಶೂರ್ಪನಖಿಯನ್ನು ಸಮಾಧಾನಪಡಿಸಲು ದಂಡಕಾರಣ್ಯದ ಜನಸ್ಥಾನದಲ್ಲಿ ಖರದೂಷಣರ ನೇತೃತ್ವದಲ್ಲಿ ಹದಿನಾಲ್ಕು ಸಾವಿರ ರಾಕ್ಷಸ ಸೈನ್ಯದ ಅಧಿಪತ್ಯವನ್ನು ಅವಳಿಗೆ ನೀಡಿದ. ತರುವಾಯ ದಾನವ ಮಧುವಿನೊಡನೆ ಯುದ್ಧಕ್ಕೆ ತೆರಳಿದಾಗ ಕುಂಭೀನಸಿಯ ಸಂಧಾನದಿಂದ ಅವನೊಡಗೂಡಿ ಇಂದ್ರಲೋಕಕ್ಕೆ ಯುದ್ಧಕ್ಕೆ ಹೋದ. ಮಾರ್ಗಮಧ್ಯದಲ್ಲಿ ನಳಕೂಬರನೊಡನೆ ರಮಿಸಲು ತೆರಳುತ್ತಿದ್ದ ಸರ್ವಾಲಂಕೃತಳಾದ ರಂಭೆಯನ್ನು ಬಲಾತ್ಕರಿಸಿದ. ಆಗ ನಳಕೂಬರ ಪರಸ್ತ್ರೀಯರನ್ನು ಬಲಾತ್ಕರಿಸಿದರೆ ಮೃತ್ಯು ಸಂಭವಿಸಲೆಂದು ಶಪಿಸಿದ. ಇಂದ್ರನೊಡನೆ ನಡೆದ ಕಾಳಗದಲ್ಲಿ ರಾವಣನ ಮಗ ಮೇಘನಾದ ಇಂದ್ರನನ್ನು ಸೆರೆಹಿಡಿದ. ಆದರೆ ಬ್ರಹ್ಮನ ಇಚ್ಚೆಯಂತೆ ಇಂದ್ರ ಬಂಧವಿಮುಕ್ತನಾದ. ಅನಂತರ ಮಾಹಿಷ್ಮತೀ ನಗರದ ಅರಸ ಸಹಸ್ರಬಾಹು ಕಾರ್ತವೀರ್ಯಾರ್ಜುನನ ಮೇಲೆ ಕಾದಿ ಅವನ ಸೆರೆಯಾಳಾಗಿ ಪುಲಸ್ತ್ಯನ ಸಲಹೆಯಂತೆ ಬಿಡುಗಡೆಯಾಗಿ ಕಾರ್ತವೀರ್ಯನ ಸ್ನೇಹಗಳಿಸಿದ. ತದನಂತರ ಕಿಷ್ಕಿಂಧೆಯ ವಾನರ ರಾಜ ವಾಳಿಯೊಡನೆ ಕದನಕ್ಕೆ ಹೋದಾಗ ಸಂಜೆಯ ಆಘ್ರ್ಯಪ್ರದಾನದಲ್ಲಿ ತೊಡಗಿದ್ದ ವಾಲಿಯನ್ನು ಹಿಡಿಯಲುಜ್ಜುಗಿಸಿದ. ಅವನು ರಾವಣನನ್ನು ತನ್ನ ತೋಳುಗಳ ಸಂಧಿಯಲ್ಲಿ ಸಿಲುಕಿಸಿಕೊಂಡು ಮೂರು ಸಮುದ್ರಗಳಲ್ಲಿ ತನ್ನ ಆಘ್ರ್ಯಪ್ರದಾನ ಕಾರ್ಯ ಮುಗಿಸಿ ಕಿಷ್ಕಿಂಧೆಗೆ ಮರಳಿದ ಅನಂತರ ಅವನನ್ನು ಬಿಡುಗಡೆ ಮಾಡಿದ. ವಾಲಿಯೊಡನೆ ಸ್ನೇಹ ಬೆಳಸಿ ಕೆಲಕಾಲ ಅಲ್ಲಿ ತಂಗಿದ್ದು ಲಂಕೆಗೆ ಮರಳಿದ.
ಅಕಂಪನೆಂಬ ರಾಕ್ಷಸನಿಂದ ರಾಮ ಜನ್ಮಸ್ಥಾನದ ಖರದೂಷಣಾದಿ ರಾಕ್ಷಸರನ್ನು ಕೊಂದ ಸಮಾಚಾರ ತಿಳಿದ ರಾವಣ, ಮಾರೀಚನ ಸಹಾಯದಿಂದ ರಾಮ-ಲಕ್ಷ್ಮಣರನ್ನು ಬೇರ್ಪಡಿಸಿ ಆಶ್ರಮದಲ್ಲಿ ಏಕಾಂಗಿಯಾಗಿದ್ದ ಸೀತೆಯನ್ನು ಅಪಹರಿಸಿದ. ಸೀತೆಯನ್ನು ಬಿಡಿಸಲು ಬಂದ ಜಟಾಯುವಿನ ರೆಕ್ಕೆಗಳನ್ನು ಕತ್ತರಿಸಿ ಲಂಕೆಯನ್ನು ತಲುಪಿ ಸೀತೆಯನ್ನು ಅಲ್ಲಿಯ ಅಶೋಕವನದಲ್ಲಿ ಬಂಧಿಸಿಟ್ಟ. ನಳಕೂಬರನ ಶಾಪದ ಭಯದಿಂದ ಸೀತೆಯನ್ನು ಬಲಾತ್ಕರಿಸಲಿಲ್ಲ.

ಈ ಮಧ್ಯೆ ರಾಮ ವಾಲಿಯನ್ನು ನಿಗ್ರಹಿಸಿ ಅವನ ತಮ್ಮ ಸುಗ್ರೀವನಿಗೆ ಕಿಷ್ಕಿಂಧೆ ರಾಜ್ಯವನ್ನು ಕೊಡಿಸಿದ. ಸುಗ್ರೀವನ ಭಂಟರಾದ ವಾನರರು ಸೀತಾನ್ವೇಷಣೆಯಲ್ಲಿ ತೊಡಗಿದ್ದಾಗ ಆ ತಂಡಗಳೊದರಲ್ಲಿದ್ದ ಹನುಮಂತ ಲಂಕೆಯಲ್ಲಿ ಸೀತೆಯನ್ನು ಕಂಡು ರಾಕ್ಷಸ ಸೈನ್ಯವನ್ನೆದುರಿಸಿ, ಇಂದ್ರಜಿತುವಿನಿಂದ ಬಂಧಿತನಾಗಿ ರಾವಣನ ಮುಂದೆ ಬಂದಾಗ ಅವನ ಶಿರಚ್ಛೇದನಕ್ಕೆ ರಾವಣ ಆಜ್ಞೆ ಮಾಡಿದ. ವಿಭೀಷಣ ದೂತಹತ್ಯೆ ನಿಷಿದ್ಧವೆಂದು ತಡೆದಾಗ ಹನುಮಂತನ ಬಾಲವನ್ನು ಸುಡುವಂತೆ ಆಜ್ಞೆ ಮಾಡಿದ. ಅದೇ ಬೆಂಕಿಯಲ್ಲಿ ಲಂಕೆಯನ್ನು ದಹಿಸಿದ ಹನುಮಂತ ಕಿಷ್ಕಿಂಧೆಗೆ ಹಿಂತಿರುಗಿ ರಾಮನಿಗೆ ಸೀತೆಯ ಸುದ್ದಿಯನ್ನು ತಿಳಿಸಿದ.

ಕಪಿಸೈನ್ಯದೊಂದಿಗೆ ರಾಮಲಕ್ಷ್ಮಣರು ಲಂಕೆಗೆ ದಾಳಿ ಮಾಡಿದಾಗ ಸೀತೆಯನ್ನು ರಾಮನಿಗೊಪ್ಪಿಸಿ ಸಂಧಿ ಮಾಡಿಕೊಳ್ಳುವಂತೆ ವಿಭೀಷಣ ರಾವಣನಿಗೆ ಸಲಹೆ ನೀಡಿದ. ರಾವಣ ಅದಕ್ಕೆ ಸಮ್ಮತಿಸಲಿಲ್ಲ. ವಿಭೀಷಣ ರಾಮನ ಆಶ್ರಯಕ್ಕೆ ಬಂದ. ರಾವಣ ಮಾಯಾಬಲದಿಂದ ರಾಮನನ್ನು ಕೊಂದುದಾಗಿ ಸೀತೆಗೆ ಮೋಸಮಾಡಲೆಳಸಿದಾಗ ಆಕೆ ಸಂಗತಿಯನ್ನು ನಂಬಲಿಲ್ಲ. ಹಾಗೆಯೇ ಸೀತೆಯನ್ನು ಕೊಂದುದಾಗಿ ರಾಮನಿಗೆ ತಿಳಿಸಿದಾಗ ಆ ಸುದ್ದಿಯನ್ನು ತಿರಸ್ಕರಿಸಿ ರಾಮ ಯುದ್ಧ ಕೈಗೊಂಡ. ಆಗ ನಡೆದ ಘನಘೋರ ಸಂಗ್ರಾಮದಲ್ಲಿ ಕೊನೆಗೆ ರಾವಣ ಸಾವನ್ನಪ್ಪಿದ. ರಾಮನ ಅನುಜ್ಞೆಯಂತೆ ವಿಭೀಷಣ ರಾವಣಾದಿಗಳ ಅಪರಕರ್ಮಗಳನ್ನು ಮಾಡಿದ ಅನಂತರ ಲಂಕಾಧಿಪತಿಯಾದ. ಅನಂತರ ರಾಮ ಲಕ್ಷ್ಮಣ ಸೀತೆಯರು ಅಯೋಧ್ಯೆಗೆ ಮರಳಿದರು.
ವಾಲ್ಮೀಕಿ ರಾಮಾಯಣವನ್ನುಳಿದು ಇತರ ರಾಮಾಯಣಗಳಲ್ಲಿ ರಾವಣನ ಪಾತ್ರ ದುರಂತನಾಯಕನಂತೆ ಚಿತ್ರಣಗೊಂಡಿರುವುದನ್ನೂ ವಿಮಲಸೂರಿಯ ಪವುಮಚರಿಯ, ನಾಗಚಂದ್ರನ ರಾಮಚಂದ್ರಚರಿತಪುರಾಣ ಹಾಗೂ ಕುವೆಂಪು ಅವರ ಶ್ರೀರಾಮಾಯಣ ದರ್ಶನಂ - ಈ ಕಾವ್ಯಗಳಲ್ಲಿ ರಾವಣನ ಪಾತ್ರ ಉದಾತ್ತೀಕರಣ ಗೊಂಡಿರುವುದನ್ನೂ ಕಾಣಬಹುದಾಗಿದೆ. 									  			
(ಎಸ್.ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ